ಕಾರ್ಥೇಜ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಪ್ರಾಚೀನ ಪ್ರಸಿದ್ಧ ನಗರಗಳಲ್ಲೊಂದು. ಇದನ್ನು ಕ್ರಿ.ಪೂ. 814ರಲ್ಲಿ ಫಿನೀಷಿಯನರು ವ್ಯಾಪಾರ ಸೌಕರ್ಯಕ್ಕಾಗಿ ಆಫ್ರಿಕದ ಉತ್ತರ ತೀರದಲ್ಲಿ ಸ್ಥಾಪಿಸಿದರು. ಟ್ಯೂನಿಸ್ ನಗರದ ನೆರೆಯಲ್ಲಿರುವ ಕಾರ್ಥೇಜಿನಲ್ಲಿ ಬಂದರು ನಿರ್ಮಾಣಕ್ಕೆ ಅನುಕೂಲಕರವಾದ ಸನ್ನಿವೇಶವೂ ವ್ಯವಸಾಯೋಪಯುಕ್ತವಾದ ಭೂಮಿಯೂ ಇರುವುದು ಒಂದು ವೈಶಿಷ್ಟ್ಯ. ಫಿನೀಷಿಯನ್ ರಾಜ್ಯ ಸ್ವತಂತ್ರವಾಗಿದ್ದಾಗ ಕಾರ್ಥೇಜ್ ಅದರ ಆಧೀನದಲ್ಲಿತ್ತು. ಆ ರಾಜ್ಯ ಪರ್ಷಿಯಕ್ಕೆ ಸೇರಿದ ಮೇಲೆ ಕಾರ್ಥೇಜ್ ಸ್ವತಂತ್ರವಾಗಿ ಬಹುಬೇಗ ತನ್ನ ರಾಜ್ಯವನ್ನು ವಿಸ್ತರಿಸಿತು. ಕ್ರಿ.ಪೂ. 550ರಲ್ಲಿ ಮಲ್‍ಚೂನನ ನೇತೃತ್ವದಲ್ಲಿ ಪಶ್ಚಿಮ ಸಿಸಿಲಿ, ಸಾರ್ಡಿನಿಯಗಳನ್ನು ಗೆದ್ದರೂ ಅನಂತರ ಸಾರ್ಡಿನಿಯದಲ್ಲಿ ಕಾರ್ಥೇಜಿಯನರು ಸೋತರು. ತರುವಾಯ ಮ್ಯಾಗೋನ ನೇತೃತ್ವದಲ್ಲಿ ಸಾರ್ಡಿನಿಯವನ್ನೂ ಗ್ರೀಕರಿಂದ ಬಾಲೇರಿಕ್ ದ್ವೀಪಗಳನ್ನೂ ಗೆದ್ದರು. ಮೈನಾರ್ಕ, ಮೆಚಾರ್ಕ ದ್ವೀಪಗಳೂ ಇವರ ವಶದಲ್ಲಿದ್ದುವು. ಆ ಕಾಲದಲ್ಲಿ ಐಬೀರಿಯ ಪರ್ಯಾಯದ್ವೀಪಕ್ಕೂ ಅವರ ಅಧಿಕಾರ ವಿಸ್ತøತವಾಯಿತು. ಟ್ಯುನಿಷಿಯ ಮತ್ತು ಆಲ್ಜೀರಿಯ ಪ್ರದೇಶಗಳ ಬಹುಭಾಗಗಳು ಅವರ ಅಧೀನಕ್ಕೆ ಬಂದುವು. ಕ್ರಿ.ಪೂ. 460ರಲ್ಲಿ ಹ್ಯಾನ್ನೋನ ನೇತೃತ್ವದಲ್ಲಿ ಅವರ ನೌಕಾಸೈನ್ಯ ಪಶ್ಚಿಮ ಆಫ್ರಿಕ ತೀರಕ್ಕೆ ಹೋದಾಗ, ಅಲ್ಲಿಯ ಬಹುಭಾಗ ಕಾರ್ಥೇಜಿನ ಪ್ರಭಾವಕ್ಕೊಳಗಾಗಿತ್ತು. ಅವರು ಒರಾನ್ ಮತ್ತು ಟ್ಯಾಂಜಿಯರ್ ನಡುವಣ ತೀರಪ್ರದೇಶದಲ್ಲಿ ಅನೇಕ ವಸಾಹತುಗಳನ್ನು ಸ್ಥಾಪಿಸಿದರು. ಕ್ರಿ.ಪೂ. 409ರಿಂದ 100 ವರ್ಷಗಳ ಕಾಲ ಗ್ರೀಕರೊಂದಿಗೆ ಸಿಸಿಲಿಯ ಸ್ವಾಮ್ಯಕ್ಕಾಗಿ ಹೋರಾಡುತ್ತಿದ್ದ ಕಾರ್ಥೇಜಿಯನರಿಂದ ಸೆಲಿನಸ್ ಮತ್ತು ಹಿಮೆರಾಗಳು ನಾಶವಾದುವು. ಕ್ರಿ.ಪೂ. 406ರಲ್ಲಿ ಹ್ಯಾನಿಬಾಲ್ ಮತ್ತು ಹ್ಯಾಮಿಲ್ಕಾರರ ನಾಯಕತ್ವದಲ್ಲಿ ಅಗ್ರಿಗೆಂಟಿಮ್, ಗೆಲ ಮತ್ತು ಕ್ಸಮರಿನಾಗಳನ್ನು ವಶಪಡಿಸಿಕೊಂಡು, ಸೈರಕ್ಯೂಸಿನ ದೊರೆ ಡಯೊನಿಸಿಸನೊಂದಿಗೆ ಇವರು ಕಾದಿದರು. ಈ ಹೋರಾಟಗಳು ಕ್ರಿ.ಪೂ. 311ರ ವರೆಗೂ ನಡೆದು ಕೊನೆಗೆ ಕಾರ್ಥೇಜಿಯನರು ವಿಜಯಿಗಳಾದರೂ ಕ್ರಿ.ಪೂ. 277ರಲ್ಲಿ ಪೈರ್ಹಸ್‍ನೊಂದಿಗೆ ನಡೆದ ಘರ್ಷಣೆಗಳ ಫಲವಗಿ ಸಿಸಿಲಿಯ ಮೇಲೆ ಪೂರ್ಣ ಸ್ವಾಮ್ಯ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಕಾರ್ಥೇಜ್ ಎಷ್ಟರಮಟ್ಟಿಗೆ ಪ್ರಾಮುಖ್ಯ ಗಳಿಸಿಕೊಂಡಿತೆಂದರೆ, ಪಶ್ಚಿಮ ಮೆಡಿಟರೇನಿಯನ್ ಸಮುದ್ರವನ್ನು ಕಾರ್ಥೇಜಿನ ಸರೋವರವೆಂದೇ ಜನ ಕರೆಯುತ್ತಿದ್ದರು. ಕ್ರಿ.ಪೂ. 3ನೆಯ ಶತಮಾನದಲ್ಲಿ ವಾಣಿಜ್ಯ ಮತ್ತು ಸೈನಿಕ ಶಕ್ತಿಯಿಂದ ಮುಂದುವರಿದ ಕಾರ್ಥೇಜ್ ಇಟಲಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರೋಮಿನ ಅಭ್ಯುದಯವನ್ನು ಪ್ರತಿಭಟಿಸಿತು. ರಾಜ್ಯಾಕ್ರಮಣನೀತಿಯನ್ನು ಮುಂದುವರಿಸಿ ಇಟಲಿಯೆಲ್ಲವನ್ನೂ ಕಬಳಿಸಿದ ರೋಂ, ರಾಜ್ಯ ಕಾರ್ಥೇಜಿನ ವಶದಲ್ಲಿದ್ದ ಸಿಸಿಲಿ, ಸಾರ್ಡಿನಿಯ ಮತ್ತು ಕಾರ್ಸಿಕ ಪ್ರದೇಶಗಳನ್ನೂ ವಶಪಡಿಸಿಕೊಳ್ಳಲು ಹಾತೊರೆಯಿತು. ರೋಮಿನ ಈ ವಿಸ್ತರಣಾಕಾಂಕ್ಷೆಗೆ ಕಾರ್ಥೇಜ್ ಅಡ್ಡ ನಿಂತಿತ್ತು. ಕಾರ್ಥೇಜ್ ರಾಜ್ಯದ ಶಕ್ತಿ ಕುಂದುವವರೆಗೂ ರೋಂ ಸಾಮ್ರಾಜ್ಯದ ಉತ್ಕರ್ಷ ಸಾಧ್ಯವಿಲ್ಲವೆಂಬುದು ಖಚಿತವಾಯಿತು. ಪರಿಣಾಮವಾಗಿ ಉಭಯ ಪಕ್ಷಗಳಿಗೂ ಯುದ್ಧ ಅನಿವಾರ್ಯವಾಯಿತು.

 ರೋಮನರು ವೀರರು, ಯುದ್ಧ ಕೌಶಲವನ್ನೂ ರಾಜಕೀಯ ನಿಪುಣತೆಯನ್ನೂ ಹೊಂದಿದ್ದವರು. ಕಾರ್ಥೇಜಿನವರು ವ್ಯಾಪಾರಿಗಳು. ಉತ್ಸಾಹಪರತೆ ಮತ್ತು ಐಶ್ವರ್ಯದಲ್ಲಿ ಕಾರ್ಥೇಜ್ ಅಗ್ರಸ್ಥಾನ ಪಡೆದಿತ್ತು. ಸಮುದ್ರವ್ಯಾಪಾರವೇ ಕಾರ್ಥೇಜಿನ ಐಶ್ವರ್ಯಕ್ಕೆ ತಳಹದಿ. ಅವರ ಹಡಗುಗಳು ಭಾರತದಿಂದ ಐರ್ಲೆಂಡಿನ ವರೆಗೂ ವ್ಯಾಪಾರ ನಡೆಸುತ್ತಿದ್ದವು. ಕಾರ್ಥೇಜ್ ನೌಕಾಬಲವನ್ನೂ ಸೈನ್ಯವನ್ನೂ ಹೊಂದಿತ್ತು. ವಾಣಿಜ್ಯೋದ್ಯಮಿಗಳೇ ಸರ್ಕಾರ ನಡೆಸುತ್ತಿದ್ದುದರಿಂದ ಅವರು ಜನರಿಗೆ ಯಾವ ರಾಜಕೀಯ ಹಕ್ಕುಗಳನ್ನೂ ಕೊಟ್ಟಿರಲಿಲ್ಲ. ಕಾರ್ಥೇಜಿನ ಸೈನ್ಯದಲ್ಲಿದ್ದವರು ವೇತನಸ್ಥ ಯೋಧರು; ಸೈನಿಕ ವೃತ್ತಿಯವರು. ಐಶ್ವರ್ಯವಂತರಾದ ಕಾರ್ಥೇಜಿನವರು ತಮಗಾಗಿ ಹೋರಾಡಲು ಹಣ ಕೊಟ್ಟು ಪಾಶ್ಚಾತ್ಯರನ್ನು ಸೈನ್ಯಕ್ಕೂ ಸಿಬ್ಬಂದಿಗೂ ನೇಮಿಸಿಕೊಂಡಿದ್ದರು. ಕಾರ್ಥೇಜ್ ಪ್ರಾಚೀನ ವಿಶ್ವ ನಗರಗಳಲ್ಲೆಲ್ಲ ಅತ್ಯಂತ ಸಂಪದ್ಭರಿತವಾದ ರಾಜ್ಯವಾಗಿತ್ತು. ವೈಜ್ಞಾನಿಕ ರೀತಿಯಿಂದ ವ್ಯವಸಾಯ ಮಾಡುತ್ತಿದ್ದುದರಿಂದಲೂ ಪೂರ್ವ-ಪಶ್ಚಿಮಗಳ ನಡುವೆ ನಡೆಯುತ್ತಿದ್ದ ವ್ಯಾಪಾರದ ಸ್ವಾಮ್ಯವನ್ನಿಟ್ಟುಕೊಂಡಿದ್ದರಿಂದಲೂ ಅದು ಅಷ್ಟು ಪ್ರಬಲ ರಾಜ್ಯವಾಗಿ ಬೆಳೆಯುವುದಕ್ಕೆ ಅವಕಾಶವಾಯಿತು--ಎಂದು ಇತಿಹಾಸಕಾರ ಪೊಲಿಬಿಯಸ್ ಹೇಳಿದ್ದಾನೆ.

 ಇಂಥ ರಾಜ್ಯವನ್ನು ಗೆಲ್ಲಲು ರೋಮನರು ಮೂರು ಯುದ್ಧಗಳನ್ನು ಮಾಡಬೇಕಾಯಿತು. ಇವು ಪ್ಯೂನಿಕ್ ಯುದ್ಧಗಳೆಂದು ಹೆಸರಾಗಿವೆ. ಬಾರ್ಕ ಕುಲಕ್ಕೆ ಸೇರಿದ ವೀರಾಗ್ರಣಿಗಳಾದ ಹ್ಯಾಮಿಲ್ಕರ್ ಬಾರ್ಕ, ಅವನ ಅಳಿಯ ಹ್ಯಾಸಡ್ರುಬಾಲ್ ಮತ್ತು ಮಗ ಹ್ಯಾನಿಬಾಲ್-ಇವರು ಕಾರ್ಥೇಜಿನ ಪರವಾಗಿ ರೋಂ ವಿರುದ್ಧ ಯುದ್ಧಮಾಡಿ ಅಸಹಾಯಶೂರರೆಂದು ಶಾಶ್ವತ ಕೀರ್ತಿ ಗಳಿಸಿದರು.

 ಒಂದನೆಯ ಪ್ಯೂನಿಕ್ ಯುದ್ಧ : ಕ್ರಿ.ಪೂ. 264ರಿಂದ 241ರ ವರೆಗೆ ನಡೆಯಿತು. ಮೆಡಿಟರೇನಿಯನ್ ಪ್ರದೇಶದಲ್ಲಿ ಕಾರ್ಥೇಜ್ ಯುದ್ಧ ಚಟುವಟಿಕೆಗಳನ್ನು ಪ್ರಾರಂಭಿಸಿದುದು ರೋಮನರಿಗೆ ಆತಂಕವನ್ನುಂಟುಮಾಡಿತು. ತಮಗೂ ಅಪಾಯವಿರುವುದನ್ನು ಕಂಡು ಅವರು ಎಚ್ಚೆತ್ತರು. ವ್ಯಾಪಾರ ಹಾಗೂ ಯೋಧರಿಗೆ ಹೆಸರುಪಡೆದಿದ್ದ ಸಿಸಿಲಿ ದ್ವೀಪವನ್ನು ವಶಪಡಿಸಿಕೊಳ್ಳುವ ರೋಮನರ ಉದ್ದೇಶ ಈ ಯುದ್ಧಕ್ಕೆ ನಾಂದಿಯಾಯಿತು. 23 ವರ್ಷಕಾಲ ನಡೆದ ಈ ಯುದ್ಧದಲ್ಲಿ ರೋಮನರು ಏಗೇಟ್ಸ್ ದ್ವೀಪಗಳಲ್ಲಿ ಕ್ರಿ.ಪೂ. 241ರಲ್ಲಿ ಅಂತಿಮ ವಿಜಯ ಗಳಿಸಿದರು. ಸೋತು ನಿರಾಶರಾದ ಕಾರ್ಥೇಜಿನವರು ತಮ್ಮ ಸೈನ್ಯವನ್ನು ವಿಸರ್ಜಿಸಬೇಕೆಂದಾಗ ಸೈನಿಕರು ದಂಗೆಯೆದ್ದು ಲೂಟಿ ಮಾಡಿ, ಕಾರ್ಥೇಜ್ ನಗರವನ್ನೇ ಮುತ್ತಿದರು. ಹ್ಯಾಮಿಲ್ಕರ್ ಬಾರ್ಕ ಅವರನ್ನು ಸದೆಬಡಿದು ನಗರವನ್ನುಳಿಸಿದ. ಅದೇ ವರ್ಷ ಕಾರ್ಥೇಜಿಯನರು ರೋಮನನೊಡನೆ ಒಪ್ಪಂದಮಾಡಿಕೊಂಡು ಸಿಸಿಲಿಯನ್ನು ಬಿಟ್ಟುಕೊಟ್ಟುದಲ್ಲದೆ ರೋಮನರಿಗೆ ಯುದ್ಧಪರಿಹಾರವನ್ನು ಕೊಡಬೇಕಾಯಿತು. ಕೆಲವು ವರ್ಷಗಳ ಅನಂತರ ರೋಮನರು ಸಿಸಿಲಿಯ ಜೊತೆಗೆ ಸಾರ್ಡಿನಿಯ ಮತ್ತು ಕಾರ್ಸಿಕ ದ್ವೀಪಗಳನ್ನು ವಶಪಡಿಸಿಕೊಂಡು ತಮ್ಮ ಅಧಿಕಾರವನ್ನು ಮತ್ತೆ ಸ್ಥಾಪಿಸಿದರು. ಅನಂತರ ಕ್ರಿ.ಪೂ. 237ರ ಸುಮಾರಿನಲ್ಲಿ ಕಾರ್ಥೇಜ್ ಸ್ಪೇನಿನ ಆಕ್ರಮಣ ಪ್ರಾರಂಭಿಸಿತು. ಕ್ರಿ.ಪೂ. 228ರಲ್ಲಿ ಹ್ಯಾಮಿಲ್ಕರನ ಮರಣದ ವರೆಗೂ ಆಕ್ರಮಣ ಕಾರ್ಯ ಮುಂದುವರಿಯಿತು. ಅವನ ಅಳಿಯ ಹ್ಯಾಸಡ್ರುಬಾಲ್ ರೋಮಿನೊಂದಿಗೆ ಸಂಧಿ ಮಾಡಿಕೊಂಡು ಎಬ್ರೋ ನದಿಯೇ ಎರಡು ರಾಜ್ಯಗಳ ನಡುವಣ ಮೇರೆಯೆಂದು ನಿರ್ಧರಿಸಿದ. ಅನಂತರ ಹ್ಯಾಮಿಲ್ಕರನ ಮಗ ಹ್ಯಾನಿಬಾಲ್ ಅಧಿಕಾರಕ್ಕೆ ಬಂದ. ಆತ ಎಬ್ರೋವನ್ನು ದಾಟಿ ಗಾಲ್ ದೇಶದ ಮಾರ್ಗವಾಗಿ ಇಟಲಿಗೆ ನುಗ್ಗಿದುದೇ ಎರಡನೆಯ ಪ್ಯೂನಿಕ್ ಯುದ್ಧಕ್ಕೆ ಕಾರಣವಾಯಿತು.

 ಎರಡನೆಯ ಪ್ಯೂನಿಕ್ ಯುದ್ಧವನ್ನು (ಕ್ರಿ.ಪೂ. 218-201) ಹ್ಯಾನಿಬಾಲ್ ಯುದ್ಧವೆಂದೂ ಕರೆಯುವುದುಂಟು. ಹ್ಯಾನಿಬಾಲ್ ಪರಾಕ್ರಮಿ. ಮೆಡಿಟರೇನಿಯನ್ ಪ್ರದೇಶದಲ್ಲಿ ಕಾರ್ಥೇಜಿನ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವುದು ಅವನ ಜೀವನಾಕಾಂಕ್ಷೆ. ಅವನ ಆಕ್ರಮಣ ನೀತಿ ರೋಮನರನ್ನು ತಲ್ಲಣಗೊಳಿಸಿತ್ತು. ಹ್ಯಾನಿಬಾಲ್ ತನ್ನ ತಂದೆ ಹ್ಯಾಮಿಲ್ಕರ್ ಬಾರ್ಕನೊಡನೆ ಹೋಗಿ ಸ್ಪೇನಿನಲ್ಲಿ ಅಧಿಕಾರ ಸ್ಥಾಪಿಸಿದ. ಇಟಲಿಯನ್ನು ವಶಪಡಿಸಿಕೊಳ್ಳಲು ಗುಟ್ಟಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಕ್ರಿ.ಪೂ. 219ರಲ್ಲಿ ಆತ ಸೆಗುಂಟಂಗೆ ಮುತ್ತಿಗೆ ಹಾಕಿದ. ರೋಮನರು ಸ್ಪೇನ್ ಮತ್ತು ಆಫ್ರಿಕಗಳಲ್ಲಿ ಯುದ್ಧಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಹ್ಯಾನಿಬಾಲ್ ಪ್ರಬಲಸೈನ್ಯದೊಡನೆ ಇಟಲಿಗೆ ನುಗ್ಗಿದ. ಕೂಡಲೆ ಕಾರ್ನಿಲಿಯಸ್ ಸಿಪಿಯೋ ಎಂಬ ಕಾನ್ಸಲ್ ಭಾರಿ ಸೈನ್ಯದೊಂದಿಗೆ ಉತ್ತರ ಇಟಲಿಯಲ್ಲಿ ಹ್ಯಾನಿಬಾಲನನ್ನು ಎದುರಿಸಿದ. ಹ್ಯಾನಿಬಾಲ್ ತನ್ನ ಅಸಾಧಾರಣ ಶಕ್ತಿಸಾಮಾಥ್ರ್ಯಗಳಿಂದ ಟ್ಯೂರಿನ್ ನಗರವನ್ನು ಗೆದ್ದು ಪೋ ನದಿಯ ಮೂಲಕ ನಡೆದು, ಕ್ರಿ.ಪೂ. 217ರಲ್ಲಿ ಟಿಸಿನಸ್ ನದಿಯ ಪಕ್ಕದಲ್ಲಿ ನಿಪಿಯೋ ವಿರುದ್ಧ ಯುದ್ಧಮಾಡಿ ಗೆದ್ದ. ಟ್ರಿಬಿಯಾ ನದೀ ದಡದಲ್ಲಿ ನಡೆದ ಮತ್ತೊಂದು ಯುದ್ಧದಲ್ಲೂ ಜಯ ಗಳಿಸಿದ. ಆದರೂ ರೋಮನರು ಪೂರ್ಣವಾಗಿ ಸೋತಿರಲಿಲ್ಲ. ಯುದ್ಧ ಮುಂದುವರಿಯಿತು. ಟ್ಟಾಸಿಮನೋ ಕದನದಲ್ಲಿ ಪುನಃ ರೋಮನರು ಸೋತರು. ರೋಮನರು ಫೇಬಿಯಸ್ ಮ್ಯಾಕ್ಸಿಮಸನ ನೇತೃತ್ವದಲ್ಲಿ ಕಿರುಕುಳ ಯುದ್ಧ ಪ್ರಾರಂಭಿಸಿದರು. ಸಂಚಾರಮಾರ್ಗಗಳನ್ನು ನಾಶಪಡಿಸಿ ಶತ್ರುಗಳಿಗೆ ನೀರು ಆಹಾರ ಸಿಕ್ಕದಂತೆ ಕ್ರಮ ಕೈಕೊಂಡರು. ಆದರೂ ಶೌರ್ಯ ಸಾಹಸಗಳಿಂದ ಹ್ಯಾನಿಬಾಲ್ ಹೋರಾಡಿ ಕ್ರಿ.ಪೂ. 216ರಲ್ಲಿ ಕ್ಯಾನೇ ಕದನದಲ್ಲಿ ರೋಮನರನ್ನು ಪೂರ್ಣವಾಗಿ ಸೋಲಿಸಿದ. ರೋಮನರು ಧೃತಿಗೆಡದೆ ಹೋರಾಡಿ ಕ್ರಿ.ಪೂ. 212ರಲ್ಲಿ ಸಿರಕ್ಯೂಸನ್ನು ಹಿಡಿದರು. ಸಿಸಿಲಿ, ಸಾರ್ಡಿನಿಯ ಮತ್ತು ಅಪೋಲಿಯ ರೋಮನರ ವಶವಾದುವು. ಪಬ್ಲಿಯಸನ ಮಗ 24 ವಯಸ್ಸಿನ ಕರ್ನಿಲಿಯಸ್ ಸಿಪಿಯೋ ರಾಷ್ಟ್ರದ ರಕ್ಷಣೆಗೆ ಅನುವಾದ. ಕ್ರಿ.ಪೂ. 207ರಲ್ಲಿ ಮೆಟರಾಸ್ ನದಿಯ ಬಳಿಯಲ್ಲಿ ನಡೆದ ಯುದ್ಧದಲ್ಲಿ ಹ್ಯಾನಿಬಾಲ್ ಸೋತು ಬ್ರೂಟಿಯಂಗೆ ಓಡಿದಾಗ ಕಾರ್ಥೇಜಿನ ಸೈನ್ಯದ ಒಂದು ಭಾಗ ನಾಶವಾಯಿತು. ಕ್ರಿ.ಪೂ. 206ರಲ್ಲಿ ಸಿಪಿಯೋ ಕಾರ್ಥೇಜಿಯನರನ್ನು ಸ್ಪೇನಿನಿಂದ ಓಡಿಸಿದ. ಸ್ಪೇನ್ ರೋಮಿಗೆ ಸೇರಿತು. ಸಿಪಿಯೋ ಆಫ್ರಿಕದ ಮೇಲೆ ದಂಡೆತ್ತಿಹೋಗಿ ಕ್ರಿ.ಪೂ. 202ರಲ್ಲಿ ನಡೆದ eóÁಮ ಕದನದಲ್ಲಿ ಪೂರ್ಣ ಜಯಗಳಿಸಿದ. ಕ್ರಿ.ಪೂ. 201ರಲ್ಲಿ ಉಭಯ ಪಕ್ಷಗಳಲ್ಲಿ ನಡೆದ ಶಾಂತಿ ಒಪ್ಪಂದದ ಪ್ರಕಾರ ಕಾರ್ಥೇಜ್ ರೋಮನರಿಗೆ ಯುದ್ಧದ ಖರ್ಚನ್ನು ಕೊಡಬೇಕಾಗಿತ್ತಲ್ಲದೆ ತನ್ನ ವಶದಲ್ಲಿದ್ದ ಹೊರಗಿನ ಪ್ರದೇಶಗಳನ್ನೆಲ್ಲ ರೋಮಿಗೆ ಒಪ್ಪಿಸಬೇಕಾಗಿತ್ತು. ರೋಮಿನ ಒಪ್ಪಿಗೆಯಿಲ್ಲದೆ ಯುದ್ಧಕಾರ್ಯದಲ್ಲಿ ತೊಡಗುವುದಿಲ್ಲವೆಂದು ಕಾರ್ಥೇಜ್ ಒಪ್ಪಿಕೊಂಡಿತು. ರೋಮನರ ಅಧಿಕಾರ ಮೆಡಿಟರೇನಿಯನ್ ಪ್ರದೇಶಕ್ಕೆ ಹರಡಿತು. ಸಿಪಿಯೋ ಹೆಸರು ಅಮರವಾಯಿತು. ತನ್ನ ಆಫ್ರಿಕ ಪ್ರದೇಶಗಳನ್ನೂ ನೌಕಾಬಲವನ್ನೂ ಕಳೆದುಕೊಂಡರೂ ಕಾರ್ಥೇಜ್ ಕ್ಷಿಪ್ರವಾಗಿ ಪುನಃ ಚೇತರಿಸಿಕೊಂಡಿತು. ಈಜಿಪ್ಟಿನ ಟಾಲೆಮಿ ದೊರೆಗಳ ಸಹಾಯದಿಂದ ಹ್ಯಾನಿಬಾಲ್ ತನ್ನ ಸೈನ್ಯಬಲವನ್ನು ಗಜಸೈನ್ಯವಾಗಿ ಬಲಗೊಳಿಸಿದ. ಈ ಮಧ್ಯೆ ನ್ಯೂಮಿಡಿಯದ ದೊರೆ ಮಸಿನಿಸ್ಸ ಕಾರ್ಥೇಜಿನ ಕೆಲಭಾಗವನ್ನು ವಶಪಡಿಸಿಕೊಂಡಾಗ ಮಧ್ಯಸ್ಥಿಕೆಗೆ ಬಂದ ರೋಮನ್ ಸೆನ್ಸಾರ್ ಕ್ಯಾಟೋ ಕಾರ್ಥೇಜಿನ ಉತ್ಕರ್ಷವನ್ನು ಕಂಡು, ಅದನ್ನು ನಾಶಪಡಿಸುವ ವರೆಗೂ ರೋಮಿಗೆ ಉಳಿಗಾಲವಿಲ್ಲವೆಂದು ತನ್ನವರನ್ನು ಎಚ್ಚರಿಸಿದ. ಈ ಮಧ್ಯೆ ರೋಮನರ ವಿಷಯದಲ್ಲಿ ನಿರಾಶರಾದ ಕಾರ್ಥೇಜಿಯನ್ ಜನ ನ್ಯೂಮಿಡಿಯದ ಸೈನ್ಯವನ್ನು ಸೋಲಿಸಿ ಓಡಿಸಿದರು. ರೋಮ್ ಕಾರ್ಥೇಜಿನ ಮೇಲೆ ಯುದ್ಧ ಸಾರಿತು.

 ಮೂರನೆಯ ಪ್ಯೂನಿಕ್ ಯುದ್ಧ: ಕ್ರಿ.ಪೂ. 149 ರಿಂದ 146ರ ವರೆಗೆ ನಡೆಯಿತು. ಕಾರ್ಥೇಜ್ ತನ್ನ ಸ್ವಾತಂತ್ರ್ಯ ರಕ್ಷಣೆಗಾಗಿ ವೀರಾವೇಶದಿಂದ ಶತ್ರುವಿನ ವಿರುದ್ಧ ಹೋರಾಡಿದರೂ ಸೋಲನ್ನು ಅಪ್ಪಬೇಕಾಯಿತು. ರೋಮನರು ಕಾರ್ಥೇಜನ್ನು ಪೂರ್ಣವಾಗಿ ನೆಲಸಮಮಾಡಿದರು; ಅಲ್ಲಿ ಸಿಕ್ಕಿದ ಜನರನ್ನೆಲ್ಲ ಗುಲಾಮರನ್ನಾಗಿ ಮಾಡಿಕೊಂಡರು. ರೋಂ ಸಾಮ್ರಾಜ್ಯದ ಬಲವನ್ನೆದುರಿಸಬಲ್ಲವರು ಯಾರೂ ಉಳಿಯಲಿಲ್ಲ. ಕಾರ್ಥೇಜಿನ ಅನಂತರದ ಚರಿತ್ರೆಗೆ -  (ನೋಡಿ- ರೋಮನ್-ಸಾಮ್ರಾಜ್ಯ)

 